ಟ್ಯಾಂಗನ್ಯೀಕ ಸರೋವರ

ಪೂರ್ವ ಆಫ್ರಿಕದಲ್ಲಿರುವ ಒಂದು ಸರೋವರ. ಸಮುದ್ರ ಪಾತಳಿಯಿಂದ 2,536' ಎತ್ತರದಲ್ಲಿರುವ ಇದರ ವಿಸ್ತೀರ್ಣ 12,700 ಚ.ಮೈ. ವಾಯುವ್ಯ-ಆಗ್ನೇಯವಾಗಿ ಇದರ ಉದ್ದ ಸು. 430 ಮೈ. ಜಗತ್ತಿನ ಸರೋವರಗಳಲ್ಲಿ ಇದು ಅತ್ಯಂತ ಉದ್ದವಾದ್ದು. ಆಳದಲ್ಲಿ ಇದು ಎರಡನೆಯದು. ಇದರ ಗರಿಷ್ಠ ಆಳ 4.708'. ಪಶ್ಚಿಮದಲ್ಲಿ ಕಾಂಗೋ, ಪೂರ್ವದಲ್ಲಿ ಟ್ಯಾನ್‍ಜóನೀಯ ಗಣರಾಜ್ಯ. ಈಶಾನ್ಯದಲ್ಲಿ ಬುರುಂಡಿ ಮತ್ತು ದಕ್ಷಿಣದಲ್ಲಿ ಜಾóಂಬೀಯಗಳು ಇದನ್ನು ಸುತ್ತುವರಿದೆವೆ. ಅನೇಕ ಹೊಳೆ ಹಳ್ಳಗಳು ಇದಕ್ಕೆ ನೀರನ್ನು ಸುರಿಯುತ್ತವೆ. ಅವುಗಳಲ್ಲಿ ಮಲಾಗರಾಸೀ ನದಿ ಜಾನ್ ಸ್ಪೆಕ್ ಮತ್ತು ರಿಚರ್ಡ್ ಬರ್ಟನ್ 1858ರಲ್ಲಿ ಈ ಸರೋವರವನ್ನು ಮೊದಲ ಬಾರಿಗೆ ಗುರುತಿಸಿದರು. ಡೇವಿಡ್ ಲಿವಿಂಗ್‍ಸ್ಟನ್ ಮತ್ತು ಹೆನ್ರಿ ಸ್ಟ್ಯಾನ್ಲೀ ಅವರು 1870 ರಲ್ಲಿ ಹೆಚ್ಚಿನ ಪರಿಶೋಧನೆ ಮಾಡಿ ಈ ತಿಳಿಗೊಳದ ಮೇಲೆ ಹೆಚ್ಚಿನ ಬೆಳಕು ಚೆಲ್ಲಿದರು. ಸರೋವರ ನೀರು ಕಪ್ಪಾದರೂ ಕುಡಿಯಲು ತಕ್ಕುದಾಗಿದೆ. ಮಳೆ ಮತ್ತು ಬೇಸಗೆಯ ಕಾಲಗಳಲ್ಲಿ ಸರೋವರ ಪಾತಳಿ ವಿಪರೀತವಾಗಿ ಏರಿಳಿಯುವುದುಂಟು. ಈ ಸರೋವರದಲ್ಲಿ ನೌಕಾಯಾನ ಕಷ್ಟಕರ.

	ಈ ಸರೋವರದ ದಕ್ಷಿಣ ಭಾಗದಲ್ಲಿ ಕೆಂಬಣ್ಣದ ಟ್ಯಾಂಗನ್ಯೀಕ ಮರಳುಗಲ್ಲು, ಉಂಡೆಗಳಲ್ಲು ಮತ್ತು ಹೊಳಪಿನ ಹರಳುಗಳು ದೊರೆಯುತ್ತವೆ. ಸುತ್ತಲಿನ ಗುಡ್ಡಬೆಟ್ಟಗಳಲ್ಲಿ ದಟ್ಟವಾದ ಗಿಡಮರಗಳು ಬೆಳದಿವೆ. ಸರೋವರದ ತೀರಗಳ ಮೇಲೆ ಬತ್ತ, ಗೋವಿನ ಜೋಳ, ಆಲೂಗಡ್ಡೆ, ಕಬ್ಬು ಇತ್ಯಾದಿ ಬೆಳೆಯುತ್ತಾರೆ. ಸರೋವರದಲ್ಲಿ ಮೀನುಗಳು ಬಹಳ. ಮೊಸಳೆಗಳೂ ಇವೆ. ಸರೋವರ ಪ್ರದೇಶದಲ್ಲಿ ಬಹುಪಾಲು ಬಂಟೂ ಜನಾಂಗದವರು ವಾಸಿಸುತ್ತಾರೆ. ಮೀನುಗಾರಿಕೆ, ಬೇಸಾಯ, ಬೇಟೆ, ಮರದ ಉದ್ಯಮ-ಇತ್ಯಾದಿ ಇವರ ಕಸಬುಗಳು.

	ಬೂಜಂಬುರ, ಉವಿರ, ಕಲೇಮೀಲ್, ಕಿಗೋಮ, ಊಜೀಜೀ-ಇವು ಸರೋವರದ ದಂಡೆಯ ಮೇಲಿರುವ ಕೆಲವು ಮುಖ್ಯ ಪಟ್ಟಣಗಳು. ಕಿಗೋಮ ಮತ್ತು ದಾರ್ ಏಸ್ ಸಲಾಮ್‍ಗಳ ಮಧ್ಯೆ ರೈಲ್ವೆ ಸಂಪರ್ಕವಿದೆ.
(ಬ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ